ಇ.ಪಿ.ರೈಸ್:--
1849-1936. ಕನ್ನಡಕ್ಕಾಗಿ ದುಡಿದ ಪಾಶ್ಚಾತ್ಯ ವಿದ್ವಾಂಸರಲ್ಲೊಬ್ಬರು. ರೈಸ್ ಎಡ್ವರ್ಡ್ ಪೀಟರ್ ಎಂಬುದು ಇವರ ಪೂರ್ಣ ಹೆಸರು. ಇಂಗ್ಲೆಂಡಿನ ಹ್ಯಾರೋ ಪಟ್ಟಣದಲ್ಲಿ 1849ರಲ್ಲಿ ಜನಿಸಿದರು. ಕ್ರೈಸ್ತಧರ್ಮ ಪ್ರಚಾರಕರಾಗಿದ್ದ ಇವರ ತಂದೆ ಬೆಂಜಮಿನ್ ಹಾಲ್ಟ್‍ರು ಬೆಂಗಳೂರಿನ ಲಂಡನ್ ಮಿಶನರಿ ಸೊಸೈಟಿಯಲ್ಲಿ ಸ್ವಲ್ಪಕಾಲ ಕೆಲಸಮಾಡಿದರು.  ತಂದೆಯೊಂದಿಗೆ ಬೆಂಗಳೂರಿನಲ್ಲಿ ಬೆಳೆದ ಇವರು ಕ್ರೈಸ್ತಧರ್ಮದ ಜೊತೆಗೆ ಕನ್ನಡ ಭಾಷೆ ಸಾಹಿತ್ಯಗಳನ್ನೂ ಅಭ್ಯಾಸ ಮಾಡಿದರು. ಬೆಂಗಳೂರುನಲ್ಲಿ ಕ್ರೈಸ್ತಮತ ಪ್ರಸಾರಕರಾಗಿ 1873-95ರ ತನಕ ಕೆಲಸ ಮಾಡಿದ ಇವರು, ಬೆಂಗಳೂರು ಲಂಡನ್ ಮಿಶನ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿ 1915ರಲ್ಲಿ ಸ್ವದೇಶಕ್ಕೆ ತೆರಳಿದರು.

ಇವರು ಕನ್ನಡಕ್ಕಾಗಿ ಹಲವು ಬಗೆಯಲ್ಲಿ ದುಡಿದಿದ್ದಾರೆ.  ಹಳೆಯ ಒಡಂಬಡಿಕೆಯನ್ನು ಸರಳಗನ್ನಡದಲ್ಲಿ ರಚಿಸಿದ್ದಲ್ಲದೆ, ಮೋಸೆಯ ಧರ್ಮಶಾಸ್ತ್ರದಲ್ಲಿ ಆದಿಕಾಂಡವು (1908), ಮೋಸೆಯ ಧರ್ಮಶಾಸ್ತ್ರದಲ್ಲಿ ಯಾತ್ರಾಕಾಂಡವು ಎಂಬ ದ್ವಿತೀಯ ಭಾಗವು (1909) ಎಂಬ ಎರಡು ಗ್ರಂಥಗಳನ್ನು ಕನ್ನಡದಲ್ಲಿ ಬರೆದಿದ್ದಾರೆ.  ಇವರು 1915ರಲ್ಲಿ ಪ್ರಕಟಿಸಿದ ಎ ಹಿಸ್ಟರೀ ಆಫ್ ಕೆನರೀಸ್ ಲಿಟರೇಚರ್ ಎಂಬುದು ಇಂಗ್ಲಿಷ್‍ನಲ್ಲಿ ರಚಿತವಾದ ಮೊದಲ ಕನ್ನಡ ಸಾಹಿತ್ಯ ಚರಿತ್ರೆ.  ಐತಿಹಾಸಿಕ ಮಹತ್ತ್ವವುಳ್ಳ ಈ ಗ್ರಂಥದಲ್ಲಿ ಜೈನ, ವೀರಶೈವ, ವೈಷ್ಣವ, ಆಧುನಿಕ ಎಂಬ ನಾಲ್ಕು ವಿಭಾಗಗಳಲ್ಲಿ ಕನ್ನಡ ಸಾಹಿತ್ಯದ ಒಂದು ಸ್ಥೂಲ ಪರಿಚಯವನ್ನು ಕೊಡಲಾಗಿದೆ.  ಈ ಗ್ರಂಥದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವರಗಳಲ್ಲಿ ಅನೇಕ ಅರೆಕೊರೆಗಳಿದ್ದರೂ ಮೊಟ್ಟಮೊದಲ ಬಾರಿಗೆ ಪ್ರಕಟವಾದ ಕನ್ನಡ ಸಾಹಿತ್ಯ ಚರಿತ್ರೆ ಎಂಬ ದೃಷ್ಟಿಯಿಂದ ಈ ಕೃತಿಗೆ ಮಹತ್ತ್ವಸಂದಿದೆ. ಇವರು 1936ರಲ್ಲಿ ನಿಧನರಾದರು.	
(ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ